ಔಪಯೋಗಿಕ ಮನಶ್ಯಾಸ್ತ್ರ: ಮಾನವನ ವರ್ತನೆಯನ್ನು ಕುರಿತ ವಾಸ್ತವಿಕ ಸಮಸ್ಯೆಗಳ ಪರಿಹಾರದಲ್ಲಿ ವೈಜ್ಞಾನಿಕ ಮನಶ್ಶಾಸ್ತ್ರದ ಕಾಣಿಕೆಗಳು ಮತ್ತು ವಿಧಾನಗಳ ಉಪಯೋಗದ ವಿವರಣೆ (ಅಪ್ಲೈಡ್ ಸೈಕಾಲಜಿ). ಅನ್ವಯ ಮನಶ್ಶಾಸ್ತ್ರವೆಂದೂ ಇದನ್ನು ಕರೆಯಲಾಗಿದೆ. ನಿರ್ದಿಷ್ಟ ಉಪಯುಕ್ತತೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರಯೋಗಾಲಯದಲ್ಲಿ ನಡೆಸುವ ಪರೀಕ್ಷೆಗಳಿಂದ ಹಿಡಿದು, ತೊಂದರೆಗೆ ಈಡಾದ ವ್ಯಕ್ತಿಗಳಿಗೆ ನೀಡಲಾಗುವ ನೇರ ಸೇವೆಗಳವರೆಗೆ ವಿಭಿನ್ನ ರೀತಿಯಲ್ಲಿ ಇದು ವ್ಯಾಪಿಸಿದೆ. 

ಮನಶ್ಶಾಸ್ತ್ರಕ್ಕೂ ಔಪಯೋಗಿಕ ನಿಜವಾದ ವ್ಯತ್ಯಾಸವಿದು: ಮಾನವ ವರ್ತನೆಯ ವಾಸ್ತವಿಕ ಮತ್ತು ನಿರ್ದಿಷ್ಟ ಸಂದರ್ಭಗಳನ್ನು ಅಧ್ಯಯನ ಮಾಡುವುದು ಔಪಯೋಗಿಕ ಮನಶ್ಶಾಸ್ತ್ರಜ್ಞನ ಕರ್ತವ್ಯ. ಈ ಅಧ್ಯಯನದಿಂದ ಆತ ಸಾಮಾನ್ಯ ಸೂತ್ರಗಳನ್ನೇನೂ ರಚಿಸುವ ಹವ್ಯಾಸಕ್ಕೆ ಹೋಗಬೇಕೆಂದಿಲ್ಲ. ಅನೇಕ ವೇಳೆಗಳಲ್ಲಿ ಪ್ರಯೋಗಶಾಲೆಯ ಹೊರಗೇ ಆತನಿಂದ ಇಂಥ ವರ್ತನೆಯ ಅವಲೋಕನ, ಅಧ್ಯಯನ ನಡೆಯುತ್ತವೆ. ಆದರೆ ಪ್ರಾಯೋಗಿಕ ಮನಶ್ಶಾಸ್ತ್ರಜ್ಞ ಹೀಗಲ್ಲ. ಕೆಲವು ಸಂದರ್ಭಗಳನ್ನು ಗಮನಿಸಿ ಅವುಗಳಿಂದ ಸಾಮಾನ್ಯ ಸೂತ್ರಗಳನ್ನು ರಚಿಸುವುದು ಅವನ ಹವ್ಯಾಸ. ಆತನ ಚಟುವಟಿಕೆ ಪ್ರಯೋಗಶಾಲೆಗೇ ಸೀಮಿತ. ಉದಾಹರಣೆಗೆ ಹೇಳುವುದಾದರೆ, ಒಂದು ಸಂಸ್ಥೆಯ ಮತ್ತು ಅದರಲ್ಲಿನ ಹುದ್ದೆಯ ಆವಶ್ಯಕತೆಗಳನ್ನು ಪುರೈಸುವ ಉದ್ದೇಶದಿಂದ ಅಭ್ಯರ್ಥಿಯ ವೈಜ್ಞಾನಿಕ ವಿಧಾನಗಳನ್ನು ರೂಪಿಸಿ, ಆ ಸಂಸ್ಥೆಯ ಸಿಬ್ಬಂದಿ ಸಮಸ್ಯೆಗೆ ಪರಿಹಾರ ದೊರಕಿಸುವುದು ಔಪಯೋಗಿಕ ಮನಶ್ಶಾಸ್ತ್ರಜ್ಞನ ಕಾರ್ಯಭಾರ. ಈ ರೀತಿಯ ವಿಧಾನ ಅದರ ಎಲ್ಲ ವಿವರಗಳ ದೃಷ್ಟಿಯಿಂದ ಮತ್ತೊಂದು ಉದ್ಯಮ ಸಂಸ್ಥೆಗೆ ಸಮರ್ಪಕವಾಗಬಹುದು ಅಥವಾ ಆಗದಿರಬಹುದು. ಮತ್ತೊಂದು ಕಡೆ ಮನೋಮಾಪನ ತಜ್ಞ (ಸೈಕೊಮೆಟ್ರಿಷಿಯನ್) ಒಂದು ಕಸುಬಿನ ಮತ್ತು ಉದ್ಯಮ ಸಂಸ್ಥೆಯ ವೈಶಿಷ್ಟ್ಯವನ್ನು ಪರಿಗಣಿಸದೆ ಮೂಲ ಸಮಸ್ಯೆಯತ್ತ ತನ್ನ ಗಮನ ಹರಿಸುತ್ತಾನೆ. ತದ್ವಿರುದ್ಧವಾಗಿ ಚಿಕಿತ್ಸಾ ಮನಶ್ಶಾಸ್ತ್ರಜ್ಞ (ಕ್ಲಿನಿಕಲ್ ಸೈಕಾಲಜಿಸ್ಟ್‌) ಮನೋರೋಗಿಯ ತೊಂದರೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಒಂದು ಜಿಕಿತ್ಸಾಕ್ರಮವನ್ನು ಕಾರ್ಯಗತಗೊಳಿಸಲು ತನ್ನಲ್ಲಿರುವ ಮನೋವೈಜ್ಞಾನಿಕ ತಿಳಿವನ್ನು ಉಪಯೋಗಿಸುತ್ತಾನೆ. ಒಬ್ಬ ರೋಗಿಯನ್ನು ಅರ್ಥಮಾಡಿಕೊಂಡಾಗ ದೊರಕಿದ ಅರಿವು ಒಂದು ಮನೋರೋಗ ಅಥವಾ ಅದರ ಚಿಕಿತ್ಸೆಗೆ ಸಂಬಂಧಪಟ್ಟ ಒಂದು ಸಿದ್ಧಾಂತವನ್ನೇ ರೂಪಿಸಲು ಸಹಕಾರಿಯಾಗಬಹುದು. ಆದರೆ ಇತರ ರೋಗಿಗಳಿಗೂ ಅದನ್ನು ಸಾಮಾನ್ಯೀಕರಿಸಲು ಅದು ನೆರವಾಗುವುದಿಲ್ಲ. ಇದೇ ರೀತಿಯಲ್ಲಿ ಒಬ್ಬ ಶಾಲಾ ಮನಶ್ಶಾಸ್ತ್ರಜ್ಞ (ಸ್ಕೂಲ್ ಸೈಕಾಲಜಿಸ್ಟ್‌) ಒಂದು ಶಾಲೆಯ ಶೈಕ್ಷಣಿಕ ಕಾರ್ಯಕ್ರಮಕ್ಕೆ ನೆರವಾಗಬಹುದು. ಆ ಕಾರ್ಯದಲ್ಲಿ ಆತ ತನಗೆ ಗೊತ್ತಿರುವ ಇಲ್ಲ ಮನೋವೈಜ್ಞಾನಿಕ ವಿಧಾನಗಳನ್ನೂ ತಿಳಿವನ್ನೂ ಉಪಯೋಗಿಸುತ್ತಾನೆ. ಆದರೆ ಎಲ್ಲ ಶಾಲೆಗಳಿಗೆ ಹಾಗೂ ವಿದ್ಯಾರ್ಥಿಗಳಿಗೆ ಸರಿಹೊಂದುವ ಸಾಮಾನ್ಯ ನಿರ್ಣಯಗಳನ್ನು ಸೂಚಿಸುವುದರಲ್ಲಿ ಮೂಲತಃ ಆತನ ಗಮನವಿರುವುದಿಲ್ಲ.

ಇದರಿಂದಾಗಿ ಒಬ್ಬ ಮನಶ್ಶಾಸ್ತ್ರಜ್ಞನಿಗೆ ದೊರಕಬೇಕಾದ ತರಬೇತಿ ವಿಶಾಲ ತಳಹದಿಯ ಮೇಲೆ ನಿಂತಿರಬೇಕಲ್ಲದೆ ಅದು ಮನಶ್ಶಾಸ್ತ್ರ ಸಿದ್ಧಾಂತ ಹಾಗೂ ವಿಧಾನಗಳು, ಅಂಕಿಅಂಶ ವಿಧಾನಗಳು ಮತ್ತು ಸಂಶೋಧನಾ ವಿಧಾನಗಳಿಗೆ ಸಂಬಂಧಪಟ್ಟಂತೆ ಸ್ಪಷ್ಟವಾದ ಜ್ಞಾನವನ್ನು ಒಳಗೊಂಡಿರಬೇಕೆಂಬುದು ವ್ಯಕ್ತವಾಗುತ್ತದೆ.

ಬೆಳೆವಣಿಗೆ: ಔಪಯೋಗಿಕ ಮನಶ್ಶಾಸ್ತ್ರ 20ನೆಯ ಶತಮಾನದ ಫಲ. ಮಾನವನ ಆರ್ಥಿಕ, ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವನದಲ್ಲಿ ಬೆಳೆಯುತ್ತಿರುವ ಜಟಿಲತೆಯಿಂದಾಗಿ ಮನಶ್ಶಾಸ್ತ್ರದ ಬೆಳೆವಣಿಗೆಯಲ್ಲೇ ಅಲ್ಲದೆ ಅನೇಕ ಮನಶ್ಶಾಸ್ತ್ರಜ್ಞರು ವಾಸ್ತವಿಕ ಸಮಸ್ಯೆಗಳ ಪರಿಹಾರ ಕಾರ್ಯದಲ್ಲೂ ತಮ್ಮ ಗಮನವನ್ನು ಹರಿಸ ತೊಡಗುವುದು ಅನಿವಾರ್ಯವಾಗಿದೆ. ಅಮೆರಿಕ ಸಂಯುಕ್ತಸಂಸ್ಥಾನದಲ್ಲಿ 1908ರಷ್ಟು ಹಿಂದೆಯೇ ಜಾಹೀರಾತು ಮನಶ್ಶಾಸ್ತ್ರದ ಮೇಲೆ ಒಂದು ಗ್ರಂಥ ಪ್ರಕಟವಾಯಿತು. 1915ರಲ್ಲಿ ಅಮೆರಿಕದ ಕಾರ್ನೆಗಿ ತಂತ್ರಜ್ಞಾನ ಸಂಸ್ಥೆಯಲ್ಲಿ (ಕಾರ್ನೆಗಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ನೇಮಕಗೊಂಡ ಮನಶ್ಶಾಸ್ತ್ರದ ಮೊಟ್ಟಮೊದಲ ಪ್ರಾಧ್ಯಾಪಕ ಬಹುಶಃ ಡಬ್ಲ್ಯು. ಡಿ. ಸ್ಕಾಟ್. ಮನಶ್ಶಾಸ್ತ್ರದ ಮೊಟ್ಟಮೊದಲನೆಯ ನಿಯತಕಾಲಿಕ ಪತ್ರಿಕೆ 1917ರಲ್ಲಿ ಪ್ರಕಟವಾಯಿತು. ಒಂದನೆಯ ಮಹಾಯುದ್ಧದ ಕಾಲದಲ್ಲಿ 1914-18, ಸೈನ್ಯದ ತುರ್ತು ಆವಶ್ಯಕತೆಗಳನ್ನು ಪುರೈಸಲು, ವಾಸ್ತವ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಹಿಡಿಯಲು ಮನಶ್ಶಾಸ್ತ್ರವನ್ನು ಅಧಿಕ ಪ್ರಮಾಣದಲ್ಲಿ ಉಪಯೋಗಿಸಲಾಯಿತೆಂದು ಹೇಳಬಹುದು. ಅಮೆರಿಕದ ವ್ಯಾಪಾರ ಮತ್ತು ಉದ್ಯಮಗಳಲ್ಲಿ ಮನಶ್ಶಾಸ್ತ್ರವನ್ನು ಬಳಸಲು ಕೈಗಾರಿಕಾಕರಣ ಮತ್ತು ನಗರೀಕರಣಗಳು (ಅರ್ಬನೈಸೇಷನ್) ಮುಖ್ಯವಾದ ಪ್ರಚೋದನೆಗಳಾದುವೆಂದು ಕಾಣುತ್ತದೆ. ಆದ್ದರಿಂದ 20ನೆಯ ಶತಮಾನದ ಮೊದಲ ಎರಡು ದಶಕಗಳಲ್ಲಿ ಮನಶ್ಶಾಸ್ತ್ರ ಸೈನಿಕವಿಜ್ಞಾನ, ವ್ಯಾಪಾರ, ಉದ್ಯಮ, ಶಿಕ್ಷಣ ಮತ್ತು ಮನೋರೋಗ ನಿದಾನ (ಸೈಕೋಪೆಥಾಲಜಿ) ಮೊದಲಾದ ಕ್ಷೇತ್ರಗಳಲ್ಲಿ ಮೊದಲು ಪ್ರವೇಶಿಸಿತು. ಮೊಟ್ಟಮೊದಲು ಮಾನಸಿಕ ಚಿಕಿತ್ಸಾಲಯ ಸ್ಥಾಪಿತವಾದದ್ದು ಈ ಕಾಲದಲ್ಲಿ. ಇಂದು ಅಮೆರಿಕದ ಮನೋವೈಜ್ಞಾನಿಕ ಸಂಘದಲ್ಲಿ ಅರ್ಧಕ್ಕಿಂತ ಹೆಚ್ಚು ಸಂಖ್ಯೆಯಲ್ಲಿ ಔದ್ಯೋಗಿಕ ಮನಶ್ಶಾಸ್ತ್ರಜ್ಞರೇ ಸದಸ್ಯರಾಗಿದ್ದಾರೆ. ಇದಲ್ಲದೆ ಇಪ್ಪತ್ತಕ್ಕಿಂತ ಹೆಚ್ಚು ಶಾಖೆಗಳಲ್ಲಿ ಎರಡು ಅಥವಾ ಮೂರು ಶಾಖೆಗಳು ಮಾತ್ರ ಈ ಕ್ಷೇತ್ರಗಳಿಗೆ ಸಂಬಂಧಪಟ್ಟಿಲ್ಲ. ಮನಶ್ಶಾಸ್ತ್ರ ಕ್ಷೇತ್ರದಲ್ಲಿ ಆರು ದಶಕಗಳಲ್ಲಿ ಆಗಿರುವ ಚೈತನ್ಯಪುರ್ಣ ಬೆಳೆವಣಿಗೆಗೆ ಎರಡು ಮಹಾಯುದ್ಧಗಳು ಎಷ್ಟು ಕಾರಣವೂ ವಿಜ್ಞಾನ ಮತ್ತು ತಂತ್ರಜ್ಞಾನಗಳಲ್ಲಿ ಆಗಿರುವ ತೀವ್ರ ಪ್ರಗತಿಯೂ ಅಷ್ಟೇ ಕಾರಣ. ಆಧುನೀಕರಣ ಪ್ರಕ್ರಿಯೆ ಮತ್ತು ವಿಶ್ವದಾದ್ಯಂತ ಆಗುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ಬದಲಾವಣೆಗಳೊಡನೆ ವಿಜ್ಞಾನ ಮತ್ತು ತಂತ್ರಜ್ಞಾನಗಳು ಸೇರಿಕೊಂಡು, ವಾಸ್ತವಿಕ ಸಮಸ್ಯೆಗಳಲ್ಲಿ ಮಾನವಾಂಶ ಎಷ್ಟೆಂಬುದನ್ನು ಸ್ಪಷ್ಟವಾಗಿ ತೋರಿಸಿಕೊಟ್ಟಿವೆ.

ಭಾರತದಲ್ಲಿ: ಎರಡನೆಯ ಮಹಾಯುದ್ಧದ ಅವಧಿಯಲ್ಲಿ ಸೈನಿಕ ಆಯ್ಕೆ ಮಂಡಳಿ ಸ್ಥಾಪಿತವಾದುದರಿಂದ ಭಾರತದಲ್ಲಿ ಔಪಯೋಗಿಕ ಮನಶ್ಶಾಸ್ತ್ರದ ಇತಿಹಾಸ ಆರಂಭವಾಯಿತು. ರಕ್ಷಣಾ ಇಲಾಖೆಯ ಪ್ರಮುಖ ಮನಶ್ಶಾಸ್ತ್ರಜ್ಞನಾಗಿ ನೇಮಕಗೊಂಡ ಮೊತ್ತಮೊದಲ ಭಾರತೀಯ ಸೋಹನ್ ಲಾಲ್, ಭಾರತೀಯ ವಿಶ್ವವಿದ್ಯಾನಿಲಯವೊಂದರಲ್ಲಿ ಔಪಯೋಗಿಕ ಮನಶ್ಶಾಸ್ತ್ರ ವಿಭಾಗ ಮೊತ್ತಮೊದಲಿಗೆ ಆರಂಭವಾದದ್ದು 1945ರಲ್ಲಿ ಪಟ್ನಾ ವಿಶ್ವವಿದ್ಯಾಲಯದಲಿ.್ಲ ಆದರೆ ಕಲ್ಕತ್ತ ವಿಶ್ವವಿದ್ಯಾನಿಲಯದ ಮನಶ್ಶಾಸ್ತ್ರ ವಿಭಾಗದ ಅನ್ವಯ ಕ್ಷೇತ್ರಗಳಲ್ಲಿ ಈ ಬಗೆಯ ಕೆಲಸ ಇದಕ್ಕೂ ಮುಂಚೆಯೇ ಆರಂಭವಾಗಿತ್ತು.

ಮುಖ್ಯ ವಿಭಾಗಗಳು: ಔಪಯೋಗಿಕ ಮನಶ್ಶಾಸ್ತ್ರದ ಮುಖ್ಯವಾದ ಕ್ಷೇತ್ರಗಳಿವು: 1.ಕೈಗಾರಿಕೆ 2. ವ್ಯವಹಾರ, 3. ಆರೋಗ್ಯ, 4. ಶಿಕ್ಷಣ, 5. ಸಮಾಜ ಕಲ್ಯಾಣ 6. ಕೃಷಿ, 7. ರಕ್ಷಣೆ ಮತ್ತು 8. ನ್ಯಾಯ ಹಾಗೂ ಸುವ್ಯವಸ್ಥೆ.

ಬುದ್ಧಿಶಕ್ತಿಯ ಮನೋವೈಜ್ಞಾನಿಕ ಪರೀಕ್ಷೆಗಳನ್ನು ಈ ಶತಮಾನದ ಆದಿಭಾಗದಲ್ಲಿ ರೂಪಿಸಿದ ತರುಣದಲ್ಲೇ ಕೈಗಾರಿಕೆ ಮತ್ತು ಸೈನ್ಯ ಇವೆರಡರಲ್ಲೂ ಸಿಬ್ಬಂದಿಯ ಆಯ್ಕೆಯ ವಿಧಾನಗಳ ಅಗತ್ಯ ಕಂಡುಬಂತು. ಆದ್ದರಿಂದ ಅನ್ವಯಮನಶ್ಶಾಸ್ತ್ರದ ಅತ್ಯಂತ ಆರಂಭಿಕ ಕಾರ್ಯಭಾರಗಳಲ್ಲಿ ಸಿಬ್ಬಂದಿಯ ಆಯ್ಕೆಯೂ ಒಂದು. ಉದ್ಯೋಗಿಗಳ ಅನುಸ್ಥಾಪನ (ಓರಿಯಂಟೇಷನ್) ಮತ್ತು ತರಬೇತಿ ಕಾರ್ಯವೂ ಅನಂತರ ಇದಕ್ಕೆ ಕೂಡಿಕೊಂಡಿತು. ಔಪಯೋಗಿಕ ಮನಶ್ಶಾಸ್ತ್ರದ ಪ್ರಮುಖ ಕ್ಷೇತ್ರಗಳಲ್ಲಿ ಕೈಗಾರಿಕಾ ಮನಶ್ಶಾಸ್ತ್ರವೂ ಒಂದು. ಬುದ್ಧಿಶಕ್ತಿ ಮತ್ತು ನಿರ್ದಿಷ್ಟ ಸಾಮಥರ್ಯ್‌ ಮತ್ತು ಕೌಶಲಗಳಲ್ಲಿ ವೈಯಕ್ತಿಕ ವ್ಯತ್ಯಾಸಗಳ ಅಳತೆಯಿಂದ ಇದು ಪ್ರಾರಂಭವಾಯಿತಾದರೂ ಅಲ್ಪಕಾಲದಲ್ಲಿಯೇ ಮನಶ್ಶಾಸ್ತ್ರದ ಒಂದು ಪ್ರಮುಖ ಶಾಖೆಯಾಗಿ ಅಭಿವೃದ್ಧಿ ಹೊಂದಿತು. ಮಾನವ ಶಿಲ್ಪ, ಯಜಮಾನ-ನೌಕರ ಸಂಬಂಧ ಇವೂ ಇದರ ವಿಷಯವಾಯಿತು. ಉದ್ಯೋಗ ನಿರತರ ಸರಳ ವರ್ಗೀಕರಣ, ಮಂದಬೆಳಕು. ಗದ್ದಲ ಮುಂತಾದುವುಗಳಿಂದ ಕಾರ್ಮಿಕನ ಕಾರ್ಯವೇಗದ ಮೇಲೆ ಆಗುವ ಪರಿಣಾಮದ ಪರಿಶೀಲನೆ ಮೊದಲಾದುವು ಮಾತ್ರ ಕೈಗಾರಿಕಾ ಮನಶ್ಶಾಸ್ತ್ರದ ಆರಂಭಿಕ ಅಧ್ಯಯನದ ಕ್ಷೇತ್ರಗಳಾಗಿದ್ದುವು. ಆದರೆ ಇಂದು ಅದು ಹೆಚ್ಚು ತೊಡಕಿನ ವಿಧಾನಗಳನ್ನಳವಡಿಸಿಕೊಂಡು ಜಟಿಲ ಸಮಸ್ಯೆಗಳನ್ನೆಲ್ಲ ಬಿಡಿಸಲು ತೊಡಗುತ್ತಿದೆ. ಮಾನವ ಸಂಬಂಧಗಳು, ಪ್ರೇರಣೆಗಳು, ನೈತಿಕ ಸ್ಥೈರ್ಯ, ಉತ್ಪಾದಕತೆ ಮತ್ತು ಸಂಘಟನೆ ಇವು ಸೇರಿಕೊಂಡು ಕೈಗಾರಿಕಾ ಮನಶ್ಶಾಸ್ತ್ರಕ್ಕೆ ಹಲವು ಹೊಸ ಆಯಾಮಗಳನ್ನೇ ಸೃಷ್ಟಿಸಿವೆ. ಅನ್ವಯ ಮನಶ್ಶಾಸ್ತ್ರದ ಇತರ ಕ್ಷೇತ್ರಗಳಂತೆ ಕೈಗಾರಿಕಾ ಮನಶ್ಶಾಸ್ತ್ರವಾದರೂ ಕೈಗಾರಿಕಾ ಚೌಕಟ್ಟಿನಲ್ಲಿ ಉದ್ಭವಿಸುವ ಸಮಸ್ಯೆಗಳ ಪರಿಹಾರಕ್ಕೆ ಮನೋವಿಜ್ಞಾನದ ಪರಿಕಲ್ಪನೆಗಳನ್ನೂ ವಿಧಾನಗಳನ್ನೂ ಅನ್ವಯಿಸಲು ಯತ್ನಿಸುತ್ತದೆ.
ಭಾರತದಲ್ಲಿ ಮೊತ್ತಮೊದಲಿಗೆ ಎರಡನೆಯ ಮಹಾಯುದ್ಧದ ಕೊನೆಯ ಹೊತ್ತಿಗೆ ಜಮ್ಷೆಡ್ಪುರದಲ್ಲಿರುವ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯಲ್ಲಿ ಕೈಗಾರಿಕಾ ಮನಶ್ಶಾಸ್ತ್ರಜ್ಞರ ನೇಮಕವಾಯಿತು. ಯುದ್ಧ ಕಳೆದ ಕೂಡಲೇ ಅಹಮದಾವಾದ್ ಜವಳಿ ಕೈಗಾರಿಕೆಗಳ ಸಂಶೋಧನ ಸಂಘದಲ್ಲಿ ಮಾನವಸಂಬಂಧಗಳ ವಿಭಾಗವೊಂದನ್ನು ಸ್ಥಾಪಿಸಲಾಯಿತು. ಇತ್ತೀಚೆಗೆ ಫೋರ್ಡ್ ಪ್ರತಿಷ್ಠಾನದ ನೆರವಿನಿಂದ ಕಲ್ಕತ್ತ ಮತ್ತು ಅಹಮದಾಬಾದ್ಗಳಲ್ಲಿ ಒಂದೊಂದು ಕೈಗಾರಿಕಾ ವ್ಯವಸ್ಥಾಪನ ಶಿಕ್ಷಣಸಂಸ್ಥೆಗಳು ಸ್ಥಾಪಿತವಾದುವು. ಇಲ್ಲಿ ಕೈಗಾರಿಕಾ ಮನಶ್ಶಾಸ್ತ್ರಜ್ಞರು ವ್ಯವಸ್ಥಾಪಕ ಸಿಬ್ಬಂದಿಗೆ ತರಬೇತಿ ನೀಡುತ್ತಾರೆ. ಕೆಲವು ಖಾಸಗಿ ಉದ್ಯಮ ಸಂಸ್ಥೆಗಳಲ್ಲೂ ಕೈಗಾರಿಕಾ ಮನಶ್ಶಾಸ್ತ್ರಜ್ಞರು ಕಾರ್ಯನಿರತರಾಗಿದ್ದಾರೆ.

ಅನುಭೋಗಿಗಳ ಸಂಪರ್ಕ, ಅವರ ಮುನ್ನೊಲವುಗಳು (ಪ್ರಿಫರೆನ್ಸಸ್), ಜಾಹೀರಾತಿನ ಅಂಶಗಳು, ಹೊಸ ಉತ್ಪನ್ನಗಳ ಜನಪ್ರಿಯಕರಣ ಮತ್ತು ಮಾರಾಟ ಮುಂತಾದವನ್ನು ಕುರಿತು ಅಧ್ಯಯನ ಮಾಡುವುದು ವ್ಯವಹಾರಿಕ ಮನಶ್ಶಾಸ್ತ್ರದ ಕ್ಷೇತ್ರ.
ಶಾಲೆ, ಕಾರ್ಖಾನೆ, ಕಚೇರಿ ಮತ್ತು ಸಂಸಾರಗಳಲ್ಲಿ ವ್ಯಕ್ತಿಗಳ ಹೊಂದಿಕೆಯ ಸಮಸ್ಯೆಗಳನ್ನು ಪರಿಹರಿಸಲು ಮನಶ್ಶಾಸ್ತ್ರದ ಇತಿಹಾಸದ ಆದಿಯಲ್ಲೇ ಮನಶ್ಶಾಸ್ತ್ರಜ್ಞರಿಗೆ ಬೇಡಿಕೆ ಬಂದಿತ್ತು. ಮಕ್ಕಳ, ಕಿಶೋರರ (ಅಡೊಲೆಸೆಂಟ್ಸ್‌) ಮತ್ತು ವಯಸ್ಕರ ಮಾನಸಿಕ ಆರೋಗ್ಯದ ಸಮಸ್ಯೆಗಳು ಅನೇಕ ಮನಶ್ಶಾಸ್ತ್ರಜ್ಞರನ್ನು ಆಕರ್ಷಿಸಿದವು. ಅನ್ವಯಮನಶ್ಶಾಸ್ತ್ರದ ಇನ್ನೊಂದು ಮುಖ್ಯ ಕ್ಷೇತ್ರವಾಗಿ ಚಿಕಿತ್ಸಾಮನಶ್ಶಾಸ್ತ್ರ (ಕ್ಲಿನಿಕಲ್ ಸೈಕಾಲಜಿ) ಅಭಿವೃದ್ಧಿ ಹೊಂದಿತು. ಮತ್ತೆ ಇಲ್ಲೂ ಯುದ್ಧಪರಿಸ್ಥಿತಿಯ ತುರ್ತು ಆವಶ್ಯಕತೆಗಳ ಕಾರಣದಿಂದಾಗಿ ಶೀಘ್ರ ಬೆಳೆವಣಿಗೆಯಾಯಿತು. ಮನೋರೋಗ ನಿದಾನ ಮತ್ತು ಚಿಕಿತ್ಸೆಗಳೇ ಚಿಕಿತ್ಸಾ ಮನಶ್ಶಾಸ್ತ್ರಜ್ಞನ ಪ್ರಮುಖ ಕರ್ತವ್ಯ.
ಸಲಹಾ (ಕೌನ್ಸೆಲಿಂಗ್) ಮನಶ್ಶಾಸ್ತ್ರ ಒಂದು ಕಡೆಯಲ್ಲಿ ಚಿಕಿತ್ಸಾ ಮನಶ್ಶಾಸ್ತ್ರದಿಂದಲೂ ಮತ್ತೊಂದು ಕಡೆಯಲ್ಲಿ ಪರೀಕ್ಷಾವಿಧಾನಗಳಿಂದಲೂ ಪ್ರಭಾವಿತವಾಗಿ, ಕುಟುಂಬ, ಸಮಾಜ, ಶಾಲಾಕಾಲೇಜುಗಳು ಮತ್ತು ಕೆಲಸದ ಸನ್ನಿವೇಶದಲ್ಲಿ ಕಂಡುಬರುವ ತಪ್ಪು ಹೊಂದಾವಣೆಯ (ಮಾಲ್-ಅಡ್ಜಸ್ಟ್‌ಮೆಂಟ್) ಸಮಸ್ಯೆಗಳ ವಿಶೇಷ ಕ್ಷೇತ್ರವನ್ನೇ ಒಳಗೊಂಡಿದೆ. ಸಹಜ ಪ್ರವೃತ್ತಿಗಳ (ಅಪ್ಟಿಟ್ಯೂಡ್ಸ್‌) ಪರೀಕ್ಷೆಗಳ ಆಧಾರದ ಮೇಲೆ ಮೊದಮೊದಲು ರೂಪಿತವಾದ ಮಾರ್ಗದರ್ಶನ ಕಾರ್ಯಕರ್ತರ ಅನುಸ್ಥಾಪನ (ಓರಿಯಂಟೇಷನ್) ಪದ್ಧತಿ ಬಹಳ ಮಟ್ಟಿಗೆ ಬದಲಾವಣೆಗೊಂಡು ಈಗ ಅದು ಸಲಹೆಯ ರೂಪು ತಳೆದಿದೆ. ಈ ರೀತಿ ಈಗ ಉದ್ಯೋಗ, ವಿವಾಹ ಮುಂತಾದವನ್ನು ಕುರಿತ ಸಲಹೆಗಳನ್ನು ನೀಡುವ ಪರಿಪಾಟಿಯಿದೆ. ಸಲಹಾನ್ವೇಷಿ (ಕೌನ್ಸೆಲೀ) ತನ್ನ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಳ್ಳಲು ನುರಿತ ಸಲಹೆಗಾರ (ಕೌನ್ಸೆಲರ್) ನೆರವಾಗುತ್ತಾನೆ.

ಮಾನಸಿಕ ಆರೋಗ್ಯವೇ ಅಲ್ಲದೆ, ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲೂ ಮನಶ್ಶಾಸ್ತ್ರಜ್ಞರು ಆಸ್ಪತ್ರೆಗಳ ಆಡಳಿತ, ವೈದ್ಯಕೀಯ ಸೇವೆಗಳು, ಸಿಬ್ಬಂದಿಯ ಆಯ್ಕೆ, ಮಾನವ ಸಂಬಂಧಗಳು, ಮನೋಭಾವಗಳು ಮುಂತಾದ ಸಮಸ್ಯೆಗಳ ಅಧ್ಯಯನದಲ್ಲಿ ತೊಡಗಿದ್ದಾರೆ. ಉದಾಹರಣೆಗೆ ಹೇಳುವುದಾದರೆ ನಮ್ಮ ದೇಶದಲ್ಲಿ ಕುಟುಂಬ ಯೋಜನೆಗೆ ವಿರೋಧದ ಕಾರಣಗಳನ್ನು ಅರ್ಥಮಾಡಿಕೊಳ್ಳಲು ಈ ಕಾರ್ಯಕ್ರಮದಲ್ಲಿ ಮನೋವಿಜ್ಞಾನಿಗಳ ಸಹಾಯವನ್ನು ಕೋರಲಾಗಿದೆ.

ಮನಶ್ಶಾಸ್ತ್ರವನ್ನು ಬಹಳ ಹಿಂದೆಯೇ ಬಳಸಿಕೊಂಡ ಕ್ಷೇತ್ರಗಳಲ್ಲಿ ಶಿಕ್ಷಣವೂ ಒಂದು. ಶಿಕ್ಷಣದ ಒಂದು ತುರ್ತು ಆವಶ್ಯಕತೆಯಿಂದ-ಎಂದರೆ ಮಾನಸಿಕವಾಗಿ ಹಿಂದುಳಿದವರ ಶಿಕ್ಷಣದ ಅಗತ್ಯದಿಂದ-ಇದು ಕುಡಿಯೊಡೆಯಿತು. ಬುದ್ಧಿಶಕ್ತಿಯ ಪ್ರಥಮ ವೈಯಕ್ತಿಕ ಮಾಪನ ವಿಧಾನವನ್ನು ರೂಪಿಸಿದವನು ಫ್ರೆಂಚ್ ಮನಶ್ಶಾಸ್ತ್ರಜ್ಞ ಆಲ್ಫ್ರೆಡ್ ಬೀನೇ (1857-1911) ಎಂಬುದು ಈಗಾಗಲೇ ಪ್ರಸಿದ್ಧವಾಗಿದೆ. ಮಾನಸಿಕವಾಗಿ ಹಿಂದುಳಿದ ಮಕ್ಕಳ ಶಿಕ್ಷಣ ಸಮಸ್ಯೆಯನ್ನು ಆತ ಎದುರಿಸಬೇಕಾಗಿತ್ತು. ಕಲಿಕೆಯ ವರ್ಗಾವಣೆಯನ್ನು (ಟ್ರಾನ್ಸ್‌ಫರ್ ಆಫ್ ಟ್ರೇನಿಂಗ್) ಕುರಿತು ಕೊಲಂಬಿಯ ವಿಶ್ವವಿದ್ಯಾನಿಲಯದಲ್ಲಿ ಆರ್. ಎಲ್. ಥಾರ್ನ್ಡೈಕ್ ಮಾಡಿದ ಸಂಶೋಧನೆಯಿಂದ ಶಿಕ್ಷಣದ ಮೇಲೆ ತತ್ಕ್ಷಣದ ಪರಿಣಾಮವುಂಟಾಯಿತು. ಇತ್ತೀಚೆಗೆ ಸ್ಕಿನ್ನರನ ಸಂಶೋಧನೆಗಳಿಂದ ಕಾರ್ಯ ಕ್ರಮಬದ್ಧ ಕಲಿಕೆಯ (ಪ್ರೋಗ್ರಾಮ್ಡ್‌ ಲರ್ನಿಂಗ್) ಬೆಳೆವಣಿಗೆಯಾಗಿದೆ.

ಬುದ್ಧಿಶಕ್ತಿ, ಸಹಜ ಪ್ರವೃತ್ತಿ, ಸಾಧನೆ ಮತ್ತು ಅಭಿರುಚಿಗಳಲ್ಲಿ ವೈಯಕ್ತಿಕ ವ್ಯತ್ಯಾಸಗಳು, ಶಾಲಾ ವಿದ್ಯಾರ್ಥಿಗಳ ವ್ಯಕ್ತಿತ್ವ. ಕಲಿಕೆಯ ಮೇಲೆ ಇವುಗಳ ಪರಿಣಾಮ ಇವನ್ನೆಲ್ಲ ಅಳೆಯುವುದು ಶಿಕ್ಷಣ ಮನಶ್ಶಾಸ್ತ್ರದ ಕೆಲಸ. ಪಠ್ಯ ವಿಷಯಗಳ ಕಲಿಕೆ, ಶೀಲರಚನೆ, ಸೂಕ್ತ ಮನೋಭಾವಗಳ ಮತ್ತು ಮೌಲ್ಯಗಳ ಸಂವರ್ಧನೆ ಇವನ್ನು ಕುರಿತ ಸಮಸ್ಯೆಗಳು ಸಾಮಾನ್ಯವಾಗಿ ಶಿಕ್ಷಣಮನಶ್ಶಾಸ್ತ್ರಜ್ಞರ ಹವ್ಯಾಸ. ಇದರಿಂದಾಗಿ ಅಮೆರಿಕದ ಮನಶ್ಶಾಸ್ತ್ರ ಸಂಘದಲ್ಲಿ ಒಂದು ವಿಶೇಷ ವಿಭಾಗ ಆರಂಭವಾಗಿದೆ. ಶಾಲಾ ಮನಶ್ಶಾಸ್ತ್ರಜ್ಞನೆಂಬ ವಿಶೇಷಜ್ಞನೇ ಇದ್ದಾನೆ. ಮಕ್ಕಳ ಹೊಂದಾವಣಿಯ ಸಮಸ್ಯೆಗಳಲ್ಲಿ ಆತನ ಆಸಕ್ತಿ. ಇವನ್ನು ಅರಿಯಬೇಕಾದರೆ ಮಗುವಿನ ಸಾಮಾಜಿಕ ಒತ್ತಡಗಳನ್ನೂ ಅದು ನಿರ್ವಹಿಸಬೇಕಾದ ಕರ್ತವ್ಯಗಳನ್ನೂ ತಿಳಿದುಕೊಳ್ಳುವುದೇ ಅಲ್ಲದೆ, ಅದರ ಬೆಳೆವಣಿಗೆಗೆ ಸಂಬಂಧಿಸಿದ ಒತ್ತಡ ಮತ್ತು ತ್ರಾಸಗಳನ್ನೂ ಅರ್ಥಮಾಡಿಕೊಳ್ಳುವುದು ಅತ್ಯಾವಶ್ಯಕ. ಉದ್ಯಮಕ್ಷೇತ್ರವನ್ನು ಪ್ರವೇಶಿಸಿರುವ ಸಾಮಾಜಿಕ ವಿಜ್ಞಾನ ಈ ಕ್ಷೇತ್ರದಲ್ಲೂ ಕಾಲಿಟ್ಟಿದೆ. ಆದ್ದರಿಂದ ಶಿಕ್ಷಣ ಮನಶ್ಶಾಸ್ತ್ರಜ್ಞನಾದವನು ಶಾಲಾ ಆಡಳಿತ ಮತ್ತು ಸಂಘಟನೆ, ಬೋಧಕರ ಪ್ರಭಾವ, ಬೋಧನೆಯ ವಿವಿಧ ವಿಧಾನಗಳ ಪರಿಣಾಮಕತೆ ಮತ್ತು ಬೋಧಕರ ತರಬೇತಿಗಳಿಗೆ ಸಂಬಂಧಿಸಿದ ಸಮಸ್ಯೆಯನ್ನು ಅಧ್ಯಯನ ಮಾಡಬೇಕಾಗುತ್ತದೆ.

ಪಠ್ಯ ವಿಷಯಗಳ ಆಯ್ಕೆ ಮತ್ತು ಉದ್ಯೋಗದ ಆಯ್ಕೆಗಳ ವಿಚಾರವಾಗಿ ಶಾಲಾ ಬಾಲಕಬಾಲಕಿಯರಿಗೆ ಮಾರ್ಗದರ್ಶನ ನೀಡುವ ಕಾರ್ಯದಲ್ಲಿ ತೊಡಗಿರುವ ಸಂಸ್ಥೆ (ಬ್ಯೂರೊ) ಭಾರತದ ಪ್ರತಿಯೊಂದು ರಾಜ್ಯದಲ್ಲೂ ಇದೆ. ಶಿಕ್ಷಕರ ಶಿಕ್ಷಣ ತರಗತಿಗಳಲ್ಲಿ ಶಿಕ್ಷಣಮನಶ್ಶಾಸ್ತ್ರವೂ ಒಂದು ಪಠ್ಯ ವಿಷಯ. ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿಯ ರಾಷ್ಟ್ರೀಯ ಸಂಸ್ಥೆಯಲ್ಲಿ ಈ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಒಂದು ಪುರ್ಣ ವಿಭಾಗವನ್ನೇ ತೆರೆಯಲಾಗಿದೆ. 
ಸಮಾಜ ಕಲ್ಯಾಣ ಕ್ಷೇತ್ರವೂ ಮನಶ್ಶಾಸ್ತ್ರಜ್ಞನಿಗೆ ಹೊರಗಾದುದಲ್ಲ. ಮಾನವನ ಸಂಕಟವನ್ನು ಪರಿಹರಿಸಲು ಸಹಕಾರಿಯಾಗಿರುವ ಅನೇಕ ಸಾಮಾಜಿಕ ಸಂಸ್ಥೆಗಳೊಂದಿಗೆ ಮನಶ್ಶಾಸ್ತ್ರಜ್ಞರೂ ಕಾರ್ಯಪ್ರವೃತ್ತರಾಗಿದ್ದಾರೆ. ಕುಂಟ ಹೆಳವ ಮಕ್ಕಳು, ಕುರುಡರು, ಕಿವುಡರು ಮುಂತಾದ ನತದೃಷ್ಟ ಜೀವಿಗಳಿಗೆ ನೆರವೀಯುವ ಅನೇಕ ಸಂಸ್ಥೆಗಳಿವೆ. ಸಂವೇಗಾತ್ಮಕ (ಇಮೋಷನಲ್) ಹೊಂದಾವಣೆ, ಕುಶಲತೆಯ ಕಲಿಕೆ ಮುಂತಾದವಕ್ಕೆ ಸಂಬಂಧಿಸಿದ ಸಮಸ್ಯೆಗಳ ಪರಿಹಾರಕ್ಕಾಗಿ ಈ ಸಂಸ್ಥೆಗಳಲ್ಲಿ ಮನಶ್ಶಾಸ್ತ್ರಜ್ಞರನ್ನು ನೇಮಿಸಲಾಗಿರುತ್ತದೆ. ಸಮಾಜಕಲ್ಯಾಣ ಕ್ಷೇತ್ರದಲ್ಲಿ ಮುಪ್ಪಿನ ಸಮಸ್ಯೆಯ ಕಡೆಗೂ ಮನಶ್ಶಾಸ್ತ್ರಜ್ಞನ ಗಮನ ಹರಿದಿದೆ. ಇದು ಸಮಾಜ ಕಲ್ಯಾಣದ ಒಂದು ವಿಷಯ. ವಿವಾಹ ಮತ್ತು ಸಂಸಾರ ಸಮಸ್ಯೆಗಳ ಬಗ್ಗೆ ಜನಕ್ಕೆ ಸಲಹೆ ನೀಡುವ ಸಂಸ್ಥೆಗಳೂ ಉಂಟು.

ಭಾರತದ ಕೃಷಿಸಂಶೋಧನೆ ಸಂಸ್ಥೆಗಳ ಒಬ್ಬ ಮನಶ್ಶಾಸ್ತ್ರಜ್ಞ ಕಾರ್ಯನಿರತ ನಾಗಿದ್ದಾನೆಂಬುದು ಗಮನಾರ್ಹ ವಿಷಯ. ಕೃಷಿಕ್ಷೇತ್ರದಲ್ಲಿ ನವೀನ ವಿಧಾನಗಳ ಅನ್ವಯದ ಬಗ್ಗೆ ರೈತರ ಮನೋಭಾವ ಮತ್ತು ಅವರ ವಿರೋಧಗಳನ್ನು ಅರ್ಥಮಾಡಿಕೊಳ್ಳಲು ಮನಶ್ಶಾಸ್ತ್ರದ ಜ್ಞಾನವನ್ನು ಬಳಸಿಕೊಳ್ಳುವುದನ್ನು ಭಾರತದಲ್ಲಿ ಒಪ್ಪಿಕೊಳ್ಳುತ್ತಿರುವುದು ಇದೇ ಮೊದಲು. ಕೃಷಿಪದ್ಧತಿಗಳನ್ನು ಸುಧಾರಿಸಲು ಇಂಥ ಅರಿವಿನಿಂದ ಮಾತ್ರ ಸಾಧ್ಯ.

ಭಾರತದಲ್ಲಿ ರಕ್ಷಣಾ ವಿಭಾಗ ಅತ್ಯಧಿಕ ಸಂಖ್ಯೆಯಲ್ಲಿ ಮನಶ್ಶಾಸ್ತ್ರಜ್ಞರನ್ನು ನೇಮಿಸಿಕೊಂಡಿದೆ. ದೆಹಲಿಯ ರಕ್ಷಣಾ ವಿಜ್ಞಾನ ಸಂಸ್ಥೆಯಲ್ಲಿ ಸೈನಿಕ ಸಮಸ್ಯೆಗಳನ್ನು ಕುರಿತು ಅಧ್ಯಯನ ನಡೆಸುತ್ತಿರುವ ಅನೇಕ ಮನಶ್ಶಾಸ್ತ್ರಜ್ಞರಿರುವ ಮನೋವೈಜ್ಞಾನಿಕ ಸಂಶೋಧನ ನಿರ್ದೇಶನ ಮಂದಿರವೇ ಇದೆ. ಇದಲ್ಲದೆ ಭಾರತದ ಅನೇಕ ಕೇಂದ್ರಗಳಲ್ಲಿ ಕೆಲಸ ಮಾಡುತ್ತಿರುವ ಆಯ್ಕೆ ಮಂಡಳಿಗಳಲ್ಲಿ ಮನಶ್ಶಾಸ್ತ್ರಜ್ಞರಿದ್ದಾರೆ. ಸೈನ್ಯದ ಹುದ್ದೆಗಳಲ್ಲಿ ಸೂಕ್ತ ಹುದ್ದೆಗಳಲ್ಲಿ ಸೂಕ್ತ ಆಯ್ಕೆ ನಡೆಸುವಲ್ಲಿ ನೆರವಾಗುವುದು ಅವರ ಕರ್ತವ್ಯ. ವಿಮಾನಚಾಲಕರ ತರಬೇತಿ ಮತ್ತು ಸಮಸ್ಯೆಗಳಿಗೂ ಹಾರಾಟ ಸುರಕ್ಷೆಗೂ ಸಂಬಂಧಿಸಿದ ಆಕಾಶಯಾನ ಮನಶ್ಶಾಸ್ತ್ರವನ್ನು ಕುರಿತು ಕಾರ್ಯಪ್ರವೃತ್ತರಾದ ಮನಶ್ಶಾಸ್ತ್ರಜ್ಞರು ವಿಮಾನಪಡೆಯ ಪ್ರಧಾನ ಕಚೇರಿಯಲ್ಲಿದ್ದಾರೆ. ನೌಕಾಪಡೆಯಲ್ಲೂ ಮನಶ್ಶಾಸ್ತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಸಿಬ್ಬಂದಿಯ ಆಯ್ಕೆ ಮತ್ತು ತರಬೇತಿಗಳು ಮಾತ್ರವೇ ಅಲ್ಲದೆ ಅವರ ಕೌಶಲವನ್ನು ಉತ್ತಮಗೊಳಿಸುವುದೂ ಇವರ ಕಾರ್ಯಭಾರ. ನೈತಿಕ ಸ್ಥೈರ್ಯ, ಮಾನಸಿಕ ಯುದ್ಧ ಮುಂತಾದುವುಗಳನ್ನೂ ಒತ್ತಡದ ಸಂದರ್ಭದಲ್ಲಿ ಯೋಧರ ಪ್ರತಿಕ್ರಿಯೆಗಳನ್ನೂ ಕುರಿತ ಸಮಸ್ಯೆಗಳ ಅಧ್ಯಯನವೇ ರಕ್ಷಣಾಕ್ಷೇತ್ರಗಳಲ್ಲಿ ಮನಶ್ಶಾಸ್ತ್ರಜ್ಞರ ಕಾರ್ಯಭಾರ. ಸೂಪರ್ಸಾನಿಕ್ ವಿಮಾನದ ನಿರ್ಮಾಣ ಮತ್ತು ಹಿಮಾಲಯದ ಎತ್ತರದ ಗಡಿಯಲ್ಲಿ ರಾಷ್ಟ್ರರಕ್ಷಣೆಯ ಅಗತ್ಯಗಳ ಫಲವಾಗಿ ಈ ಉನ್ನತ ಮಟ್ಟದಲ್ಲಿ ಮನುಷ್ಯರ ಪ್ರತಿಕ್ರಿಯೆಗಳೇನೆಂಬುದನ್ನು ಅಧ್ಯಯನ ಮಾಡುವುದು ಅವಶ್ಯವಾಗಿದೆ. 

ಪ್ರತಿಯೊಂದು ಸಮಾಜಕ್ಕೂ ಅಪರಾಧಿಯದೊಂದು ನಿರಂತರ ಸಮಸ್ಯೆ. ಅಪರಾಧಿಗಳ ಪತ್ತೆ, ಸುಧಾರಣೆ ಮತ್ತು ಪುನರುತ್ಥಾನ ಇವುಗಳಲ್ಲೂ ಮನಶ್ಶಾಸ್ತ್ರಜ್ಞರು ನಿರತರಾಗಿದ್ದಾರೆ. ಅನೇಕ ದೇಶಗಳಲ್ಲಿ ಬಾಲಾಪರಾಧ ಒಂದು ಜಟಿಲ ಸಮಸ್ಯೆಯಾಗಿ ಪರಿಣಮಿಸುತ್ತಿದೆ. ಇದರ ಫಲವಾಗಿ ಅನೇಕ ಮನೋವಿಜ್ಞಾನಿಗಳು ಬಾಲಾಪರಾಧಿಗಳನ್ನು ತಿದ್ದುವ ಕಾರ್ಯದಲ್ಲಿ ತೊಡಗಿದ್ದಾರಲ್ಲದೆ ಕಾನೂನಿನ ದೃಷ್ಟಿಯಲ್ಲಿ ತಪ್ಪಿತಸ್ಥರಾದ ಕಿರಿಯರ ಬಂಧನಾವಧಿಯಲ್ಲಿ ಅವರ ಹಿತರಕ್ಷಣೆಯ ಹೊಣೆ ವಹಿಸುತ್ತಾರೆ. ಸಾಕ್ಷ್ಯ ಮತ್ತು ರುಜುವಾತುಗಳನ್ನು ವಿಶ್ಲೇಷಿಸುವ ಕಾರ್ಯದಲ್ಲೂ ಮನಶ್ಶಾಸ್ತ್ರಜ್ಞರು ನಿರತರಾಗಿದ್ದಾರೆ.	(ಎಸ್.ಕೆ.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ